ಅಶ್ವಥ್ ಸಿ (1939-. ) `ಸುಗಮ ಸಂಗೀತ ಕ್ಕೆ ನವಚೈತನ್ಯ ನೀಡಿದ ಪ್ರಯೋಗಶೀಲ, ಸಂಗೀತ ಸಂಯೋಜಕ, ಗಾಯಕ. ಹುಟ್ಟಿದ್ದು ಬೆಂಗಳೂರಿನಲ್ಲಿ 1939ರ ಡಿಸೆಂಬರ್ 29ರಂದು ತಂದೆ ಶ್ರೀಧರ ರಾಮರಾಯರು, ತಾಯಿ ಶಾರದಮ್ಮ. ಅಶ್ವಥ್ ಅವರಿಗೆ ಕಲೆ ಎಂಬುದು ಮನೆಯ ಪರಿಸರದಿಂದ ಹಾಗೂ ಹೊರಗಿನ ಪ್ರಭಾವದಿಂದ ಬಂದದ್ದು. ಅವರ ಅಣ್ಣಂದಿರಾದ ಸಿ.ವಿಶ್ವನಾಥರಾವ್ ಮತ್ತು ಸಿ. ನಾಗರಾಜರಾವ್, ನಾಟಕ, ಗಾಯನ ಎರಡರಲ್ಲೂ ನುರಿತಿದ್ದರು. ಅಶ್ವಥ್ ಅವರ ಸೋದರತ್ತೆ ವೀಣೆ ನುಡಿಸುತ್ತಿದ್ದರು. ಅಶ್ವಥ್ ಅವರಿಗೆ ಸಂಗೀತಾಸಕ್ತಿ ಮೂಡಲು ಕಾರಣ ಅವರ ಅಣ್ಣಂದಿರ ಚಟುವಟಿಕೆಗಳು. ಅಲ್ಲದೆ ಬಾಲ್ಯದಲ್ಲಿ ಕಿವಿಗೆ ಬೀಳುತ್ತಿದ್ದ ಹಿಂದಿ ಚಲನಚಿತ್ರದ ಪ್ರಖ್ಯಾತ ಹಿನ್ನೆಲೆ ಗಾಯಕರಾದ ಕೆ.ಎಲ್. ಸೈಗಾಲ್ ಮತ್ತು ಮಹಮ್ಮದ್ ರಫಿ ಅವರ ಗಾಯನ. ಇವರಿಬ್ಬರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದ್ದರು. ಅವರ ಹಾಡುಗಳನ್ನು ಕಲಿತು ಹಾಡಲು ಪ್ರಾರಂಭಿಸಿದ್ದರು. ಹತ್ತು ವರುಷದವರಾಗಿದ್ದಾಗ ಸುಗಮಸಂಗೀತದ ಹಾಡುಹಕ್ಕಿ ಪಿ. ಕಾಳಿಂಗರಾವ್ ಅವರು ಹಾಡಿದ ಯಾರು ಹಿತವರು ಈ ಮೂವರೊಳಗೆ, ಮಾಡುಸಿಕ್ಕದಲ್ಲ ಮುಂತಾದ ಗೀತೆಗಳಿಂದ ರೋಮಾಂಚಿತಗೊಳ್ಳುತ್ತಿದ್ದರು. ಪಿ. ಕಾಳಿಂಗರಾವ್ ಹಾಡಿದ ಈ ಹಾಡುಗಳು ಆಗ ಧ್ವನಿತಟ್ಟೆಗಳ ಮೂಲಕ ಪ್ರಸಾರವಾಗುತ್ತಿತ್ತು. ಬೆಂಗಳೂರಿನ ಬಸವನಗುಡಿಯ ಆಚಾರ್ಯ ಪಾಠಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಆರಂಭ. ಬಾಲ್ಯದಿಂದಲೇ ರಾಮಕೃಷ್ಣ ಆಶ್ರಮದಲ್ಲಿ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಓದಿ 1960ರಲ್ಲಿ ವಿಜ್ಞಾನ ಪದವೀಧರರಾದರು. ತಮ್ಮ ಕಾಲೇಜು ದಿನಗಳಲ್ಲಿ ಹಿಂದಿ ಚಲನಚಿತ್ರಗಳಿಂದ ಬಹುಮಟ್ಟಿಗೆ ಪ್ರಭಾವಿತರಾಗಿದ್ದರು. ಮಹಮದ್ ರಫಿ ಹಾಡಿದ ಎಲ್ಲಾ ಚಿತ್ರಗೀತೆಗಳೂ ಅವರಿಗೆ ಕಂಠಪಾಠವಾಗಿತ್ತು. ರಫಿ ಅವರಿಗೆ ಪತ್ರ ಬರೆದು ಅವರ ಹಸ್ತಾಕ್ಷರವನ್ನು ಪಡೆದು ಅದನ್ನು ಜೋಪಾನವಾಗಿ ಕಾಯ್ದಿರಿಸಿಕೊಂಡಿದ್ದರು. 1960ರಲ್ಲಿ ಪದವಿ ಶಿಕ್ಷಣ ಮುಗಿಸಿದ ಅಶ್ವಥ್ ಅವರು ಹಿಂದೂಸ್ಥಾನಿ ಸಂಗೀತ ಶಿಕ್ಷಣ ಪಡೆದದ್ದು ದೇವಗಿರಿ ಶಂಕರರಾವ್ ಜೋಶಿಯವರಲ್ಲಿ, ನಟರಂಗ ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯರಾದ ಅಶ್ವಥ್ ಪ್ರಪ್ರಥಮವಾಗಿ ಸಂಗೀತ ಸಂಯೋಜನೆ ಪ್ರಾರಂಭಿಸಿದ್ದು ನಾಟಕಕ್ಕೆ ಸಂಗೀತ ನೀಡುವುದರ ಮೂಲಕ. ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟ ನಾಟಕ ಕಾಕನಕೋಟೆ. ತಮ್ಮ ಕಾಲೇಜು ಜೀವನದಲ್ಲೇ ಭಾವಗೀತೆಗಳಿಗೆ ಮಟ್ಟು ಕೂಡಿಸುವ ಹವ್ಯಾಸ. ಕೆ.ಎಸ್.ನರಸಿಂಹಸ್ವಾಮಿಯವರ ಮೈಸೂರಮಲ್ಲಿಗೆಯ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದರು. ಅವರಲ್ಲಿದ್ದ ಸಂಗೀತ ಸಂಯೋಜಕ ಪೂರ್ಣವಾಗಿ ತೆರೆದುಕೊಂಡಿದ್ದು ಭಾವಗೀತಾತ್ಮಕವಾದ ಅರ್ಥಪೂರ್ಣ ಕವಿತೆಗಳಿಗೆ ಸಂತ ಶಿಶುನಾಳ ಷರೀಫರ ಗೀತೆಗಳಿಗೆ, ಸಂಗೀತ ಸಂಯೋಜಿಸಿದಾಗ. ಅವುಗಳು ಜನರ ಬಾಯಲ್ಲಿ ಉಳಿಯುವಂತೆ ಮಾಡಿದ ಸಾಧನೆ ಅಶ್ವಥ್ ಅವರದಾಯಿತು. ಪುಸ್ತಕರೂಪದಲ್ಲಿ ಒಗಟಾಗಿ ಕುಳಿತಿದ್ದ ಷರೀಫರ ಹಾಡುಗಳಿಗೆ ಅಶ್ವಥ್ ಅವರು ತಮ್ಮ ಸಂಗೀತದ ಮೂಲಕ ಚೈತನ್ಯದ ಸಂಚಾರ ಮಾಡಿಸಿದರು. ಸುಮಾರು ಎಪ್ಪತ್ತೆರಡು ಗೀತೆಗಳು ಅಶ್ವಥ್‍ರ ಸಂಗೀತ ಸಂಯೋಜನೆಯಲ್ಲಿ ಅರಳಿ ನಿಂತವು. 1980ರಿಂದ ಧ್ವನಿಸುರುಳಿಯ ಮಾಧ್ಯಮಕ್ಕೆ ಕಾಲಿಟ್ಟು ಸುಮಾರು 70ಕ್ಕೂ ಹೆಚ್ಚಿನ ಧ್ವನಿಸುರುಳಿಗಳಿಗೆ ಸಂಗೀತ ನಿರ್ದೇಶನ ಮಾಡಿದರು, ಹಾಡಿದರು, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಡಿ.ವಿ.ಜಿ, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ, ಪು.ತಿ.ನರಸಿಂಹಾಚಾರ್, ಲಕ್ಷ್ಮೀನಾರಾಯಣ ಭಟ್ಟ, ಚಂದ್ರಶೇಖರ ಕಂಬಾರ, ಹೆಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಸಿದ್ಧಲಿಂಗಯ್ಯ, ದೊಡ್ಡರಂಗೇಗೌಡ, ವ್ಯಾಸರಾವ್, ಮುಂತಾದವರ ಗೀತೆಗಳನ್ನು ಕರ್ನಾಟಕದ ಮೂಲೆಮೂಲೆಗೂ ತಲುಪಿಸಿದರು. ಸಂಗೀತ ನಿರ್ದೇಶನ ಅಶ್ವಥ್ ಮಾಡಿದ್ದು ಸುಮಾರು ಮೂವತ್ತೈದು ನಾಟಕಗಳಿಗೆ. ಮಾಸ್ತಿ ಅವರ `ಕಾಕನಕೋಟೆ, ಲಂಕೇಶರ `ಬಿರುಕು, ಗಿರೀಶ್ ಕಾರ್ನಾಡರ `ಹಯವದನ - ತುಘಲಕ್, ನಾಗಮಂಡಲ `ತಲೆದಂಡ - ಕುವೆಂಪು ಅವರ `ರಕ್ತಾಕ್ಷಿ, `ಬಿರುಗಾಳಿ, `ಒಥೆಲೊ, `ಮಿಡ್‍ಸಮ್ಮರ್ಸ್ ನೈಟ್ ಡ್ರೀಮ್ಸ್, `ಕಕೇಶಿಯನ್ ಚಾಕ್ ಸರ್ಕಲ್, `ಊರುಭಂಗ, `ಮೃಚ್ಛಕಟಿಕ, `ಭೈರವಿ ಮುಂತಾದವು. `ನಾಗಮಂಡಲ, `ಟಿಪಿಕಲ್ ಟಿ.ಪಿ. ಕೈಲಾಸಂ ನಾಟಕಗಳ ಗೀತೆಗಳು ಧ್ವನಿಸುರುಳಿಗಳಾಗಿಯೂ ಜನಪ್ರಿಯವಾದವು. `ಕಾಕನಕೋಟೆ ನಾಟಕ ಚಲನಚಿತ್ರವಾಯಿತು. ಅದು ಇವರ ಮೊಟ್ಟಮೊದಲ ಚಲನಚಿತ್ರವೂ ಆಯಿತು. `ಕಾಕನಕೋಟೆ ಚಿತ್ರದ ಸಂಗೀತರ ನಿರ್ದೇಶನದಿಂದ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಅಶ್ವಥ್ ಮತ್ತೆ ಎಂದೂ ತಿರುಗಿ ನೋಡದ ಮಟ್ಟಕ್ಕೆ ಎತ್ತರವಾಗಿ ಬೆಳೆದರು. ತಮ್ಮದೇ ಸ್ವಂತ ಶೈಲಿಯ ಮುದ್ರೆ ಒತ್ತಿದರು. ಕನ್ನಡ ಚಿತ್ರರಂಗಕ್ಕೆ ತಮ್ಮ ವಿಶಿಷ್ಟ ಶೈಲಿಯ ಸಂಗೀತದ ಮೂಲಕ ಅಶ್ವಥ್ ನೀಡಿದ ಕೊಡುಗೆ ಗಮನಾರ್ಹ. ಹಿಂದೆ ಚಲನಚಿತ್ರದಲ್ಲಿ ಬೇಂದ್ರೆ, ಕುವೆಂಪು, ಪು.ತಿ.ನ. ಅವರ ಹಾಡುಗಳು ಬಳಕೆಯಾಗಿದ್ದವು. ಅಶ್ವಥ್ ಅವರು ಭಾವಗೀತೆಗಳನ್ನೇ ಹೆಣೆದು ಚಲನಚಿತ್ರಗಳನ್ನಾಗಿ ರೂಪಿಸಿದರು ಮಾಸ್ತಿಯವರ ಕಾಕನಕೋಟೆ ನಾಟಕ ಚಲನಚಿತ್ರವಾದಂತೆ, ಶಿಶುನಾಳ ಷರೀಫರ ತತ್ವಪದಗಳು ಚಿತ್ರವಾಯಿತು. ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಕೂಡ ಚಲನಚಿತ್ರವಾಯಿತು. ಹೀಗೆಯೇ ಗಿರೀಶ್ ಕಾರ್ನಾಡರ ನಾಗಮಂಡಲ, ಹೆಚ್.ಎಸ್. ವೆಂಕಟೇಶಮೂರ್ತಿಯವರ ಚಿನ್ನಾರಿಮುತ್ತ, ಕೊಟ್ರೇಶಿ ಕನಸು ಮುಂತಾದವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಮನ್ನಣೆಗಳನ್ನು ಪಡೆದುಕೊಂಡ ಚಿತ್ರಗಳ ಸಂಗೀತ ನಿರ್ದೇಶಕರು. ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಉಪೇಂದ್ರಕುಮಾರ್, ರಾಜನ್ ನಾಗೇಂದ್ರ, ಎಂ. ರಂಗರಾವ್, ಹಂಸಲೇಖ. ಇಳಯರಾಜಾ ಅಲ್ಲದೆ ಹಲವಾರು ಸಂಗೀತ ನಿರ್ದೇಶಕರ ಸಂಗೀತ ಸಂಯೋಜನೆಗಳನ್ನು ಹಾಡಿ ಅತ್ಯಂತ ಜನಪ್ರಿಯ ಗಾಯಕರೂ ಆದರು. ನಾಟಕ ಚಲನಚಿತ್ರ, ಸುಗಮಸಂಗೀತ - ಈ ಮೂರು ಕ್ಷೇತ್ರದಲ್ಲೂ ಅಸಾಮಾನ್ಯರೆನಿಸಿದರು. ಆದರೆ ಅವರ ಒಲವು ಹೆಚ್ಚಾಗಿ ಹರಿದದ್ದು ಸುಗಮಸಂಗೀತ ಕ್ಷೇತ್ರದತ್ತ. ಇದು ಈ ಕ್ಷೇತ್ರಕ್ಕೆ ಅತ್ಯಂತ ಲಾಭದಾಯಕವಾಯಿತು. ಸುಗಮ ಸಂಗೀತದ ಹರಿಕಾರರಾದ ಬಾಳಪ್ಪ ಹುಕ್ಕೇರಿ, ಕಾಳಿಂಗರಾವ್, ಮೈಸೂರು ಅನಂತಸ್ವಾಮಿಯವರ ಸಾಲಿನಲ್ಲಿ ಗಮನಾರ್ಹರಾಗಿ ಸೇರ್ಪಡೆಯಾದರು. `ಕವಿತಾ ಗಾಯನ, `ಭಾವಗೀತಾಗಾಯನ, `ಲಘು ಸಂಗೀತ - ಎಂದೇ ಬಳಸಲ್ಪಡುತ್ತಿದ್ದ ಸಂಗೀತಕ್ಕೆ `ಸುಗಮಸಂಗೀತವೆಂಬ ಸುಂದರವಾದ ಹೆಸರನ್ನಿಟ್ಟವರು ಅದಕ್ಕಾಗಿ ಕೆಲಸ ಮಾಡಿದವರು ಅಶ್ವಥ್. ಸುಗಮಸಂಗೀತವನ್ನು ಸಂಘಟಿಸುವುದರಲ್ಲಿ ಮಹತ್ವದ ಪಾತ್ರವಹಿಸಿದರು. ಕವಿಗಳಿಗೂ, ಕಲಾವಿದರಿಗೂ ಸಂಪರ್ಕ ಸೇತುವೆಯಾದರು. `ಧ್ವನಿ ಎಂಬ `ಸುಗಮಸಂಗೀತ ಕೇಂದ್ರವನ್ನು ಹುಟ್ಟುಹಾಕಿದರು. `ಸುಗಮಸಂಗೀತ ಬಗೆಗೆ ಒಂದು ಪುಸ್ತಕವನ್ನೇ ಬರೆದರು. ಅದಕ್ಕೆ 1987-88ರ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿತು. ಸುಗಮ ಸಂಗೀತದ ಬಗೆಗೆ ತಾವು ನಂಬಿರುವ ಸಿದ್ಧಾಂತಗಳನ್ನು ಅನೇಕ ಉದಾಹರಣೆಗಳ ಸಹಿತ, ಸಂಘಟನೆಗಳ ಸಹಿತ ದಿಟ್ಟತನದಿಂದ ಪ್ರತಿಪಾದಿಸಿದರು. ಹಲವಾರು ಬಾರಿ ವಿದೇಶ ಪ್ರವಾಸ ಮಾಡಿ ಸುಗಮಸಂಗೀತವನ್ನು ದೇಶವಿದೇಶಗಳಲ್ಲಿ ಪಸರಿಸಿದರು. ಸುಗಮಸಂಗೀತದ ಮುನ್ನಡೆಯಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿಸಿದವರು ಅಶ್ವಥ್, ಕುವೆಂಪು ಅವರ ವೈಚಾರಿಕ ಗೀತೆಗಳನ್ನು ಆರಿಸಿ ಸಂಗೀತ ಸಂಯೋಜಿಸಿ ಕರ್ನಾಟಕದಾದ್ಯಂತ ಗಾಯಕ ಗಾಯಕಿಯರನ್ನು ಕರೆಸಿ ಒಂದು ಸಾವಿರ ಕಲಾವಿದರಿಂದ ಹಾಡಿಸಿದರು. ಸಮೂಹ ಗಾಯನಕ್ಕೆ `ಮನುಜಮತ ವಿಶ್ವಪಥ ಎಂಬ ವಿಶಾಲ ಅರ್ಥದ ಶೀರ್ಷಿಕೆ ನೀಡಿದರು. ಅದಕ್ಕೆ ನೃತ್ಯ ಸಂಯೋಜನೆಯನ್ನೂ ಮಾಡಿಸಿದರು (1999). ದೂರದರ್ಶನ ಧಾರವಾಹಿಗಳಿಗೆ `ಶೀರ್ಷಿಕೆ ಸಂಗೀತ ನೀಡಿ ಅದರಲ್ಲೂ ಪ್ರಥಮ ಸ್ಥಾನ, ಮನ್ನಣೆ ಪಡೆದರು. 1974ರಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕರ್ನಾಟಕ ದರ್ಶನಕ್ಕೆ ಸಂಗೀತ ನೀಡಿದರು. 1982ರಲ್ಲಿ ಏಷಿಯಾಡ್ 82ಕ್ಕೂ ಅಶ್ವಥ್ ಅವರೇ ಸಂಗೀತ ನೀಡಿ ದಾಖಲೆ ನಿರ್ಮಿಸಿದರು. 1985ರಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಅಲ್ಲಿನ ಅನಿವಾಸಿ ಕನ್ನಡಿಗರಿಗೆ ತರಬೇತಿ ನೀಡಿದರು. 1987ರಲ್ಲಿ ಜವಾಹರಲಾಲ್ ನೆಹರೂ ಅವರ ನೂರನೇ ಜನ್ಮ ದಿನಾಚರಣೆಯ ಅಂಗವಾಗಿ `ಶ್ರದ್ಧಾಂಜಲಿ ಎಂಬ ಧ್ವನಿಸುರುಳಿಯನ್ನು ಏಳುಭಾಷೆಗಳಲ್ಲಿ ಹೊರತಂದರು. ದೂರದರ್ಶನದಲ್ಲಿ ಇವರೇ ಸಂಗೀತ ಸಂಯೋಜಿಸಿದ `ಗೀತಮಾಧುರಿ - ಭಾವಗೀತೆಗಳು ಜನಪ್ರಿಯವಾದವು. ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಆಶ್ವಥ್ ಸುಗಮಸಂಗೀತದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಸ್ವಯಂ ನಿವೃತ್ತಿ ಪಡೆದರು. ಬಹುಮುಖ ಪ್ರತಿಭೆಗೆ ಸಂದ ಪ್ರಶಸ್ತಿಗಳು ಹಲವಾರು. ಸ್ಪಂದನ (1978) `ಏನೇಬರಲಿ ಪ್ರೀತಿ ಇರಲಿ (1979) ಚಿನ್ನಾರಿಮುತ್ತ (1994) ಚಿತ್ರಗಳಿಗೆ ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿ ಲಭಿಸಿತು. ವರ್ಷಋತು (1999) ಚಿತ್ರಕ್ಕಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿ ದೊರೆತಿದೆ. ಕರ್ನಾಟಕ ಕಲಾ ತಿಲಕ ಪ್ರಶಸ್ತಿ (1988), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1986), ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (1987), ಕರ್ನಾಟಕ ನಾಟಕ ಅಕಾಡೆಮಿ ಫಿಲೋಷಿಪ್ (1944), ಹೀಗೆ ಹಲವಾರು ಪ್ರಶಸ್ತಿ ಪುರಸ್ಕøತರಾದ ಅಶ್ವಥ್ ಅವರು ಸುಗಮಸಂಗೀತ ಕ್ಷೇತ್ರದ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರದ ಪ್ರತಿಷ್ಠಿತ `ಶಿಶುನಾಳ ಷರೀಫ್ ಪ್ರಶಸ್ತಿ (1997) ನೀಡಿ ಗೌರವಿಸಿದೆ. (ಜಯಶ್ರೀ ಅರವಿಂದ್)